ಟರ್ಪೆಂಟೈನ್	
	ಶಂಕ್ವಾಕೃತಿಯ ಕಾಯಿಗಳನ್ನು ಬಿಡುವ ಮುಖ್ಯವಾಗಿ ಪೈನ್ ಜಾತಿಯ ಮರಗಳಿಂದ (ಪೈನಸ್ ಸಿಲ್ವೆಸ್ಟ್ರಿಸ್) ಜಿನುಗುವ ತೈಲ. ವೆನಿಸ್ (ಅಥವಾ ಲಾರ್ಚ್) ತೈಲ ಹಾಗೂ ಕೆನಡಾ ಬಾಲ್ಸಮ್ ಪರಿಚಿತ ಉದಾಹರಣೆಗಳು. ಟರ್ಪೆಂಟೈನನ್ನು ಸಾಮಾನ್ಯವಾಗಿ ಪೈನ್ ಮರಗಳ ಸಮೃದ್ಧಿ ಇರುವ ದೇಶಗಳಲ್ಲಿ ಉತ್ಪಾದಿಸಲಾಗುವುದು. ಯೂರೋಪಿನ ಪ್ರಮುಖ ಟರ್ಪೆಂಟೈನ್ ತೈಲಗಳು ಗೊಂಚಲು ಪೈನ್ ಮತ್ತು ಸ್ಕಾಚ್ ಪೈನಿನಿಂದಲೂ ಅಮೆರಿಕದ ತೈಲಗಳು ಉದ್ದ ಎಲೆಯ ಪೈನ್ ಮತ್ತು ಸ್ಲ್ಯಾಷ್ ಪೈನಿನಿಂದಲೂ ದೊರೆಯುತ್ತವೆ. ಪೈನ್ ಮರದಲ್ಲಿ ರಂಧ್ರ ಕೊರೆದು ಇಳಿಸಿದ ತೈಲರಾಳದಲ್ಲಿ ರೆಸಿನ್ ಆಮ್ಲ, ನೀರು ಮುಂತಾದವನ್ನು ಬಿಟ್ಟರೆ 18% ಟರ್ಪೆಂಟೈನ್ ಇರಬಹುದು.

	ಟರ್ಪೆಂಟೈನ್ ಸುವಾಸನಾಪೂರಿತ ವರ್ಣರಹಿತ ದಹನಶೀಲ ದ್ರವ. ಇದು ನೀರಿನಲ್ಲಿ ವಿಲೀನವಾಗುವುದಿಲ್ಲ. ಇದರ ರುಚಿ ಖಾರ. ಗಂಧಕ, ರಂಜಕ, ಮೇಣ, ಎಣ್ಣೆ ಮತ್ತು ನೈಸರ್ಗಿಕ ರಬ್ಬರುಗಳಿಗೆ ಇದು ಒಳ್ಳೆಯ ವಿಲೇಯಕ. ವಾಯು ಸಂಪರ್ಕದಲ್ಲಿ ಇದು ಘನೀಭವಿಸುತ್ತದೆ. ರಾಸಾಯನಿಕವಾಗಿ ಟರ್ಪೆಂಟೈನು ಪೈನೀನ್ ಮತ್ತು ಇತರ ಏಕಚಕ್ರೀಯ ಟರ್ಪಿನುಗಳ ಮಿಶ್ರಣ. ಬಣ್ಣ ಮತ್ತು ವಾರ್ನಿಷುಗಳಲ್ಲಿ ವಿಲೇಯಕವಾಗಿ ಟರ್ಪೆಂಟೈನಿನ ಅತ್ಯಧಿಕ ಉಪಯೋಗವಿದೆ. ಇದು ಬಣ್ಣ ತೆಳುಕಾರಿ. ಕುಂಚವನ್ನು ಸ್ಪಷ್ಟವಾಗಿ ಮತ್ತು ಬಣ್ಣವನ್ನು ತೆಳುವಾಗಿ ಇಡುವುದರಿಂದ ಬಣ್ಣಗಳಲ್ಲಿ ಇದರ ಸೇರ್ಪಡೆ ಬಣ್ಣಗಾರರಿಗೆ ಇಷ್ಟವಾದರೂ ಬಣ್ಣ ಮತ್ತು ವಾರ್ನಿಷ್ ಉತ್ಪಾದಕರು ಅಗ್ಗದ ಪೆಟ್ರೋಲಿಯಂ ಎಣ್ಣೆಗಳನ್ನೇ ಬಣ್ಣ ತೆಳುಕಾರಿಗಳಾಗಿ ಉಪಯೋಗಿಸುವುದುಂಟು. ಎಣ್ಣೆ ಮತ್ತು ಮೆರುಗುಗಳಿಗೆ ದ್ರಾವಕವಾಗಿ ಮತ್ತು ಸಂಶ್ಲೇಷಿತಕರ್ಪೂರ, ಪೈನ್ ಎಣ್ಣೆ ತಯಾರಿಕೆಗಳಲ್ಲಿ ಟರ್ಪೆಂಟೈನಿನ ಉಪಯೋಗವಿದೆ. ಮಧ್ಯವರ್ತಿಯಾಗಿ ಕ್ರಿಮಿನಾಶಕ ಮತ್ತು ಸಂಶ್ಲೇಷಿತ ರಾಳಗಳ ತಯಾರಿಕೆಯಲ್ಲಿಯೂ ಇದರ ಬಳಕೆ ಉಂಟು. ಶುದ್ಧಗೊಳಿಸಿದ ಟರ್ಪೆಂಟೈನನ್ನು ಶ್ವಾಸಕೋಶಾವರಣದ ಉರಿಯೂತ (ಪ್ಲೂರಸಿ) ಮತ್ತು ಶ್ವಾಸನಾಳಗಳ ಒಳಚರ್ಮ ಊತ (ಬ್ಯ್ರಾಂಕೈಟಿಸ್) ರೋಗಗಳ ಚಿಕಿತ್ಸೆಯಲ್ಲಿ ಬಾಹ್ಯಲೇಪನವಾಗಿ ಮತ್ತು ಮೂಗುಪೆಟ್ಟು ಮತ್ತು ಉಳುಕುಗಳಿಗೆ ಉಪಯೋಗಿಸುವ ಉಜ್ಜು ತೈಲಗಳ ಘಟಕವಾಗಿ, ಪಶುವೈದ್ಯದಲ್ಲಿ ಕುದುರೆ ಹಂದಿ ಮತ್ತು ನಾಯಿಗಳಲ್ಲಿ ಜಂತುಹುಳುನಾಶಕವಾಗಿ ಮತ್ತು ಪ್ರತಿ ಉದ್ರೇಕಕಾರಿಯಾಗಿ ಉಪಯೋಗಿಸಲಾಗುವುದು. ವೈದ್ಯರಂಗದಲ್ಲಿ ಇದಕ್ಕೆ ಸಾಕಷ್ಟು ಪೂರ್ವಚರಿತ್ರೆ ಇದ್ದಾಗ್ಯೂ ಆಧುನಿಕ ವೈದ್ಯದಲ್ಲಿ ಇದರ ಉಪಯೋಗ ತೀರ ಕಡಿಮೆ.
(ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ